2027-28ರ ಶೈಕ್ಷಣಿಕ ವರ್ಷದ 5 ನೇ ತರಗತಿಯ ಪ್ರವೇಶಕ್ಕೆ ಅವಕಾಶವಿದೆ. ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಂಕುರ್ ಸಂಸ್ಥೆಯಲ್ಲಿ ಕ್ರೀಡಾ ಸಾಧನೆ

ಸೆಪ್ಟೆಂಬರ್ 2026

ಸುನಿತ ಪೀಟರ್ (ಉಪ ಪ್ರಾಂಶುಪಾಲರು, ಅಂಕುರ್)

ಕ್ರೀಡಾ ಸಾಧನೆ ಹಾಗೂ ನಾಯಕತ್ವದ ಪರಂಪರೆಯ ವಿವರವಾದ ಯಶೋಗಾಥೆ

ನಮ್ಮ ಅಂಕುರ್ ವಸತಿ ಶಾಲೆಯ ಆವರಣದ ಪ್ರತಿ ಪ್ರಶಾಂತ ಮುಂಜಾನೆಯು ಶಿಳ್ಳೆಯ ಧ್ವನಿಯೊಂದಿಗೆ ಜಾಗೃತಗೊಳ್ಳುತ್ತದೆ. ಅಂಕುರ್ ಸಂಸ್ಥೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಈ ಮೌನವು ಅತ್ಯಂತ ಹರ್ಷದಾಯಕ ಮತ್ತು ಗೆಲುವಿನ ಧ್ವನಿಗಳಿಗೆ ದಾರಿ ಮಾಡಿಕೊಡುತ್ತಿದೆ – ಕರಚೆಂಡಿನ (ವಾಲಿಬಾಲ್) ಸದ್ದು, ಕ್ರೀಡಾಂಗಣದಲ್ಲಿ ಬುಟ್ಟಿಚೆಂಡಿನ (ಬಾಸ್ಕೆಟ್‌ಬಾಲ್) ಆಟಗಾರರ ಪಾದರಕ್ಷೆಗಳ ಕೀರುಧ್ವನಿ, ಓಟದ ಹಾದಿಯಲ್ಲಿ ಓಡುವ ಪಾದಗಳ ಲಯಬದ್ಧ ಸದ್ದು. ಇOದು ಕೇವಲ ಓದಿನಲ್ಲಿ ಮಾತ್ರವಲ್ಲದೆ, ಆಟದಲ್ಲೂ ನಮ್ಮ ಮಕ್ಕಳು ಅಪ್ರತಿಮರು ಎಂಬುದನ್ನು ಪ್ರತಿ ಪಂದ್ಯದಲ್ಲೂ, ಪ್ರತಿ ಕ್ರೀಡಾಋತುವಿನಲ್ಲೂ ಕಂಡುಕೊಳ್ಳುತ್ತಿರುವ ಧನಸಹಾಯದ ಶೈಕ್ಷಣಿಕ ಯೋಜನೆಯ ಯಶೋಗಾಥೆಯಾಗಿದೆ; ಇಲ್ಲಿನ ಮಕ್ಕಳು ಆಟಗಾರರು, ಕಠಿಣ ಸ್ಪರ್ಧಿಗಳು ಮತ್ತು ರೂಪುಗೊಳ್ಳುತ್ತಿರುವ ವಿಜೇತರು.

ಕೇವಲ ಪಠ್ಯೇತರ ಚಟುವಟಿಕೆಯಲ್ಲ, ಅದಕ್ಕೂ ಮಿಗಿಲಾದುದು

ಪ್ರತಿಯೊಬ್ಬ ಮಗುವಿಗೂ ಕೇವಲ ತರಗತಿಯ ಕೋಣೆಯಷ್ಟೇ ಅಲ್ಲದೆ, ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ, ಆಟದ ಮೈದಾನ ಮತ್ತು ಓಟದ ಪಥ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳು ಸಿಗಬೇಕು ಎಂಬ ದೃಢವಾದ ನಂಬಿಕೆಯ ಮೇಲೆ ಈ ಯೋಜನೆಯನ್ನು ರೂಪಿಸಲಾಗಿದೆ. ಅಂಕುರ್ ಸಂಸ್ಥೆಯಲ್ಲಿ ಕ್ರೀಡೆಯು ಎಂದಿಗೂ ಕೇವಲ ಕಡೆಯ ಆದ್ಯತೆಯಾಗಿರಲಿಲ್ಲ. ಅಂಕುರ್ ನೀಡುವ ಅನುಭವದ ಅತ್ಯಂತ ಸ್ಪಷ್ಟವಾದ ಅಭಿವ್ಯಕ್ತಿಗಳಲ್ಲಿ ಕ್ರೀಡೆಯೂ ಒಂದಾಗಿದೆ: ಸಮಾಜದ ಹಿಂದುಳಿದ ವರ್ಗಗಳಿಂದ ಬರುವ ಮಕ್ಕಳು ತಮಗಿಂತ ದೊಡ್ಡದಾದ ಒಂದು ಸಂಸ್ಥೆಯನ್ನು ಪ್ರತಿನಿಧಿಸುವುದು ಹೇಗೆ ಮತ್ತು ಅದರಲ್ಲಿ ಅತ್ಯುನ್ನತ ಸಾಧನೆ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ಕಂಡುಕೊಳ್ಳುತ್ತಿದ್ದಾರೆ. ಕ್ರೀಡಾಫಲಕವು ಕೇವಲ ಅರ್ಧ ಕಥೆಯನ್ನು ಹೇಳುತ್ತದೆ; ಉಳಿದ ಕಥೆಯು ಪ್ರತಿ ಕ್ರೀಡಾಋತುವಿನಲ್ಲೂ ತಂಡದ ಪಟ್ಟಿಗಳಲ್ಲಿ ಮತ್ತು ನಾಯಕತ್ವದ ಹೊಣೆ ಹೊತ್ತವರ ಹೆಸರುಗಳಲ್ಲಿ ಮರುಕಳಿಸುತ್ತಿದೆ, ಇದು ಕೇವಲ ಭಾಗವಹಿಸುವಿಕೆಯಾಗಿ ಪ್ರಾರಂಭವಾಗಿ, ಈಗ ಅತ್ಯುತ್ತಮ ಸಾಧನೆಯ ಸಂಸ್ಕೃತಿಯಾಗಿ ಬೆಳೆದು ನಿಂತಿರುವುದಕ್ಕೆ ಸಾಕ್ಷಿಯಾಗಿದೆ.

ಇದು ಪಂದ್ಯಗಳ ಪಟ್ಟಿಯ ಜೊತೆಗೆ ಅತ್ಯಂತ ಮೌನವಾಗಿ ಸಾಗುವ ನಾಯಕತ್ವ ತರಬೇತಿ ಕಾರ್ಯಕ್ರಮವಾಗಿದೆ. ಇಲ್ಲಿ ಜವಾಬ್ದಾರಿಯನ್ನು ಕ್ರೀಡಾಂಗಣದಲ್ಲಿನ ಶ್ರಮದ ಮೂಲಕ ಗಳಿಸಿಕೊಳ್ಳಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಅಂಕುರ್ ಮಕ್ಕಳು ಇಡೀ ಸಂಹಿತಾ ಶಾಲೆಯ ಕ್ರೀಡಾ ನಾಯಕತ್ವವನ್ನು ವಹಿಸಿಕೊಳ್ಳುವ ಮೂಲಕ ಸಂಸ್ಥೆಯ ಸಂಪೂರ್ಣ ನಂಬಿಕೆಯನ್ನು ಗಳಿಸುತ್ತಿದೆ.

ಕ್ರೀಡಾಂಗಣದಲ್ಲಿ ನಾಯಕತ್ವದ ಪರಂಪರೆ

೨೦೨೦-೨೧ ರ ಸಾಲಿನಿಂದ, ಶಾಲೆಯ ಅತ್ಯುನ್ನತ ಕ್ರೀಡಾ ಗೌರವವಾದ ಸಂಹಿತಾ ಶಾಲೆಯ ಕ್ರೀಡಾ ನಾಯಕತ್ವದ ಪಟ್ಟವು ಅಂಕುರ್ ಸಂಸ್ಥೆಯ ಪ್ರತಿಭಾವಂತ ಆಟಗಾರರಾದ ಜಗದೀಶ್ ರಾಮಚಂದ್ರ, ಸಾನಿಯಾ ವಲ್ಲಿಕಾರ್, ಯಶವಂತ್ ಆನಂದ್ ಮತ್ತು ಮಿಥುನ್ ಅವರ ಹೆಗಲೇರಿ ಯಶಸ್ವಿಯಾಗಿ ಮುನ್ನಡೆದಿದೆ. ಪ್ರತಿಯೊಬ್ಬರೂ ತಮ್ಮ ಅವಧಿಯಲ್ಲಿ ಈ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿ, ಮುಂದಿನ ಅಂಕುರ್ ಮಗುವಿಗೆ ಹಸ್ತಾಂತರಿಸಿದ್ದಾರೆ. ಈ ನಿರಂತರತೆಯ ಜೊತೆಗೆ ಆಟಗಾರರನ್ನು ನಾಯಕರನ್ನಾಗಿ ರೂಪಿಸುವ ವಿಧಾನವೂ ಇಲ್ಲಿ ಶ್ಲಾಘನೀಯವಾಗಿದೆ. ಉದಾಹರಣೆಗೆ, ಅಭಿಷೇಕ್ ಸಿದ್ದಪ್ಪ ಅವರು ೨೦೨೪ ರ ವರ್ಷದಲ್ಲಿ ಉಪನಾಯಕರಾಗಿ ಸೇವೆ ಸಲ್ಲಿಸಿ, ಮರು ವರ್ಷವೇ (೨೦೨೫-೨೬) ನಾಯಕರಾಗಿ ಜವಾಬ್ದಾರಿ ವಹಿಸಿಕೊಂಡರು. ಈ ಪರಂಪರೆಯು ೨೦೨೬-೨೭ ರ ಸಾಲಿನಲ್ಲಿಯೂ ಮುಂದುವರಿದಿದ್ದು, ದೇಬಾಶಿಶ್ ನಾಯಕರಾಗಿ ಮತ್ತು ತರುಣ್ ಆರ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ; ಇದು ಇಂದಿನ ಕಲಿಯುವ ಆಟಗಾರನನ್ನು ನಾಳೆಯ ಸಮರ್ಥ ನಾಯಕನನ್ನಾಗಿ ರೂಪಿಸುವ ಅತ್ಯುತ್ತಮ ಯೋಜನೆಯಾಗಿದೆ.

ಮಹತ್ವದ ಮುನ್ನಡೆ: ರಜತ ಪದಕ, ರಾಷ್ಟ್ರೀಯ ಪಂದ್ಯಾವಳಿ ಮತ್ತು ಅತ್ಯುತ್ತಮ ಆಟಗಾರ ಪ್ರಶಸ್ತಿ

ಅಂಕುರ್ ಸಂಸ್ಥೆಯ ಕ್ರೀಡಾ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯವಿದ್ದರೆ, ಅದು ೨೦೨೩ ರ ಅಕ್ಟೋಬರ್ ತಿಂಗಳಿನಲ್ಲಿ ಬರೆಯಲ್ಪಟ್ಟಿತು. ಆ ತಿಂಗಳ ೧೨ ರಂದು, ಮಾಗಡಿ ರಸ್ತೆಯ ವಿದ್ಯಾಸಂಸ್ಕಾರ ಅಂತರರಾಷ್ಟ್ರೀಯ ಶಾಲೆಯಲ್ಲಿ ನಡೆದ ಕರಚೆಂಡಾಟ (ವಾಲಿಬಾಲ್)  ಪಂದ್ಯಾವಳಿಯಲ್ಲಿ ಅಂಕುರ್ ಆಟಗಾರರನ್ನು ಪ್ರಮುಖವಾಗಿ ಹೊಂದಿದ್ದ ತಂಡವು ಅಭೂತಪೂರ್ವ ಸಾಧನೆ ಮಾಡಿತು. ಅವರು ಸತತ ಎಂಟು ಪಂದ್ಯಗಳನ್ನು ಜಯಿಸಿ, ಒಟ್ಟು ೧೭೬ ಪ್ರತಿಸ್ಪರ್ಧಿ ಶಾಲೆಗಳ ಪೈಕಿ ದ್ವಿತೀಯ ಸ್ಥಾನ ಪಡೆದು ರಜತ ಪದಕವನ್ನು ಮುಡಿಗೇರಿಸಿಕೊಂಡರು. ಇಡೀ ಪಂದ್ಯಾವಳಿಯಲ್ಲಿ ಯಶವಂತ್ ಆನಂದ್ ಅವರ ಅತ್ಯುತ್ತಮ ಆಟವು ಅವರಿಗೆ ‘ಪಂದ್ಯಾವಳಿಯ ಅತ್ಯುತ್ತಮ ಆಟಗಾರ’ ಪ್ರಶಸ್ತಿಯನ್ನು ತಂದುಕೊಟ್ಟಿತು, ಇದು ಕೇವಲ ವೈಯಕ್ತಿಕ ಮೈಲಿಗಲ್ಲಷ್ಟೇ ಅಲ್ಲದೆ, ಇಡೀ ತಂಡದ ಶ್ರಮಕ್ಕೆ ಸಂದ ಜಯವಾಗಿದೆ. ಈ ಯಶಸ್ಸು ಇದೂವರೆಗೆ ತೆರೆಯದ ಹೊಸ ಬಾಗಿಲನ್ನು ತೆರೆಯಿತು; ಉತ್ತರ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಕರಚೆಂಡಾಟ ಪಂದ್ಯಾವಳಿಗೆ ರಾಜ್ಯ ಮಟ್ಟದಿಂದ ಆಯ್ಕೆಯಾಗಿ, ಅಂಕುರ್‌ನ ಆಟಗಾರರು ರಾಷ್ಟ್ರ ಮಟ್ಟದ ವೇದಿಕೆಗೆ ಆಯ್ಕೆಯಾದರು.

ಹತ್ತು ದಿನಗಳ ನಂತರ, ಬೆಳಗಾವಿಯ ಲವ್‌ಡೇಲ್ ಶಾಲೆಯ ಕಾಲ್ಚೆಂಡಿನ (ಫುಟ್‌ಬಾಲ್) ಮೈದಾನದಲ್ಲಿ, ನಮ್ಮ ಆಟಗಾರರು ಅದೇ ರೀತಿಯ ಸಾಧನೆಯನ್ನು ಪುನರಾವರ್ತಿಸಿದರು. ಅವರು ೭೨ ತಂಡಗಳ ಪೈಕಿ ದ್ವಿತೀಯ ಸ್ಥಾನ ಗಳಿಸಿ, ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾದರು. ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಗೋಲುಗಳನ್ನು ತಡೆಯುವಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಭಿಷೇಕ್ ಸಿದ್ದಪ್ಪ ಅವರಿಗೆ ‘ಪಂದ್ಯಾವಳಿಯ ಅತ್ಯುತ್ತಮ ಗೋಲುರಕ್ಷಕ’ ಪ್ರಶಸ್ತಿ ಒಲಿಯಿತು. ಇವು ಕೇವಲ ಆಕಸ್ಮಿಕ ಜಯಗಳಾಗಿರಲಿಲ್ಲ; ನಮ್ಮ ಮಕ್ಕಳ ಕಠಿಣ ಪರಿಶ್ರಮ ಮತ್ತು ಸ್ಥಿರತೆಯು ಯಶಸ್ಸಿನ ಹೊಸ ಹಾದಿಯನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಇವು ನಿದರ್ಶನಗಳಾಗಿದ್ದವು.

ಫಲಿತಾಂಶಗಳನ್ನೂ ಮೀರಿ

ಇಲ್ಲಿನ ಪ್ರತಿಯೊಂದು ಕಥೆಯೂ ಕೇವಲ ಗೆಲುವಿನ ಕಪ್ ಅಥವಾ ಪದಕಗಳ ಬಗ್ಗೆ ಮಾತ್ರವಲ್ಲ. ೨೦೨೩ ರ ಅಕ್ಟೋಬರ್ ತಿಂಗಳಿನಲ್ಲಿ, ಅಮೃತಾ ಮತ್ತು ಶ್ವೇತಾ ಎಂಬ ಇಬ್ಬರು ವಿದ್ಯಾರ್ಥಿನಿಯರು ಅಂತರ-ಶಾಲಾ ಖೋ-ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿ, ಸೆಮಿಫೈನಲ್ ಹಂತದವರೆಗೆ ತಲುಪಿ ತಮ್ಮ ಹೋರಾಟವನ್ನು ಮುಗಿಸಿದರು. ಅವರ ಕೈಗೆ ಯಾವುದೇ ಪದಕ ಸಿಗಲಿಲ್ಲವಾದರೂ, ಅಲ್ಲಿ ಧೃತಿಗೆಡದ ಮನೋಭಾವ, ಕ್ರೀಡಾ ಧರ್ಮ ಮತ್ತು ಕ್ರೀಡಾ ಪಯಣದ ಯಶಸ್ವಿ ಆರಂಭವಿತ್ತು. ಅಂಕುರ್ ಸಂಸ್ಥೆಯು ಮಕ್ಕಳಲ್ಲಿ ಮೂಡಿಸಲು ಬಯಸುವ ನಿಜವಾದ ಮೌಲ್ಯವೇ ಇದು. ಆ ತಂಡದ ಪ್ರತಿಯೊಂದು ಮಗುವೂ, ಕ್ರೀಡಾಋತುವನ್ನು ಜಯದೊಂದಿಗೆ ಕೊನೆಗೊಳಿಸಲಿ ಅಥವಾ ಸೋಲಿನ ಪಾಠದೊಂದಿಗೆ ಮುಗಿಸಲಿ, ಅವರೆಲ್ಲರಿಗೂ ಕಷ್ಟಕರವಾದ ಗುರಿಯನ್ನು ಸಾಧಿಸಲು ಒಟ್ಟಾಗಿ ಶ್ರಮಿಸುವ ಅಮೂಲ್ಯ ಅನುಭವ ದೊರೆಯುತ್ತಿದೆ.

ಎಲ್ಲಾ ವಿಭಾಗಗಳಲ್ಲೂ ವ್ಯಾಪಕತೆ

ಯಾವುದೇ ಒಂದು ದೊಡ್ಡ ಯಶಸ್ಸಿನ ನಡುವೆ ನಾವು ಸುಲಭವಾಗಿ ಮರೆಯಬಹುದಾದ ವಿಷಯವೆಂದರೆ, ಕ್ರೀಡೆಯು ಎಷ್ಟು ವಿಸ್ತಾರವಾಗಿ ಹರಡಿದೆ ಎಂಬುದು. ನಮ್ಮ ಆಟಗಾರರು ಕರಚೆಂಡಾಟ, ಬುಟ್ಟಿಚೆಂಡಾಟ, ಕಾಲ್ಚೆಂಡಾಟ, ಓಟ ಹಾಗೂ ಜಿಗಿತದ ಕ್ರೀಡೆಗಳು ಮತ್ತು ಖೋ-ಖೋ ಕ್ರೀಡೆಗಳಲ್ಲಿ ಸ್ಪರ್ಧಿಸಿ ಸ್ಥಾನಗಳನ್ನು ಗಳಿಸಿದ್ದಾರೆ. ಇವು ಬೆಂಗಳೂರಿನ ಶಾಲಾ ವಲಯದಿಂದ ಹಿಡಿದು ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ದಾವಣಗೆರೆ ಹಾಗೂ ರಾಯಚೂರಿನ ಪ್ರಾದೇಶಿಕ ಪಂದ್ಯಾವಳಿಗಳವರೆಗಿನ ಸ್ಥಳಗಳಲ್ಲಿ ನಡೆದಿವೆ.

೨೦೨೪-೨೫ ರ ಕ್ರೀಡಾಋತುವಿನಲ್ಲಿ, ಅಂಕುರ್ ಮಕ್ಕಳನ್ನು ಒಳಗೊಂಡ ತಂಡಗಳು ಹನ್ನೆರಡಕ್ಕೂ ಹೆಚ್ಚು ಅಂತರ-ಶಾಲಾ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದವು. ಈ ಪ್ರಯಾಣದಲ್ಲಿ ಬಾಲಕಿಯರ ಕರಚೆಂಡಾಟ ತಂಡದ ಗೆಲುವು ಮತ್ತು ವಾರ್ಷಿಕ ಕ್ರೀಡಾಕೂಟದಲ್ಲಿ ಹಿರಿಯರ ವಿಭಾಗದಲ್ಲಿ ಲಲಿತ್ ಹಾಗೂ ಕಿರಿಯರ ವಿಭಾಗದಲ್ಲಿ ಸಾಯಿದತ್ ಅವರು ವೈಯಕ್ತಿಕ ಕ್ರೀಡಾ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು. ಅದೇ ಕ್ರೀಡಾ ದಿನದಂದು ಇಡೀ ವಿದ್ಯಾರ್ಥಿ ವೃಂದವು ೭೪ ಚಿನ್ನ, ೭೬ ಬೆಳ್ಳಿ ಮತ್ತು ೧೧ ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ಶಾಲೆಯ ಸ್ವಂತ ಮೈದಾನದಲ್ಲಿ ನಡೆದ ಪಂದ್ಯಗಳಲ್ಲಿ ಅಂಕುರ್‌ನ ಮಕ್ಕಳು ನಿರಂತರವಾಗಿ ಅತ್ಯುನ್ನತ ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.

ನಂತರದ ಕ್ರೀಡಾಋತುವು ಮತ್ತಷ್ಟು ಸಾಧನೆಗಳೊಂದಿಗೆ ಅಡಿಪಾಯವನ್ನು ಗಟ್ಟಿಗೊಳಿಸಿತು: ೭ ರಿಂದ ೧೨ ನೇ ತರಗತಿಯ ಆಯ್ದ ವಿದ್ಯಾರ್ಥಿಗಳ ನಡುವೆ ನಡೆದ ಕರಚೆಂಡಾಟ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ, ಅಂತರ-ಶಾಲಾ ಪಂದ್ಯಾವಳಿಯಲ್ಲಿ ಬಾಲಕಿಯರ ತಂಡಕ್ಕೆ ದ್ವಿತೀಯ ಸ್ಥಾನ ಮತ್ತು ಬುಟ್ಟಿಚೆಂಡಾಟದಲ್ಲಿ ಜಯ ಲಭಿಸಿತು. ವಿವಿಧ ಅಕಾಡೆಮಿಗಳ

ಪಂದ್ಯಾವಳಿಗಳ ಫಲಿತಾಂಶಗಳು ಹೀಗಿವೆ: ಕರಚೆಂಡಾಟದಲ್ಲಿ ಅನುರಾಗ್ ಅತ್ಯುತ್ತಮ ದಾಳಿಗಾರ ಎಂದು ಹೆಸರಿಸಲ್ಪಟ್ಟು ದ್ವಿತೀಯ ಸ್ಥಾನ ಗಳಿಸಿದರು; ೧೭ ವರ್ಷದೊಳಗಿನ ಬಾಲಕಿಯರ ಕರಚೆಂಡಾಟ ತಂಡವು ಪ್ರಥಮ ಸ್ಥಾನ ಗಳಿಸಿತು; ಬಾಲಕರ ಬುಟ್ಟಿಚೆಂಡಾಟ ತಂಡವು ವಿಜೇತರಾಗಿ ಕಪ್ ಗೆದ್ದುಕೊಂಡಿತು ಮತ್ತು ಭೂಮಿಕಾ ಅವರಿಗೆ ಅತ್ಯುತ್ತಮ ಸರ್ವಾಂಗೀಣ ಆಟಗಾರ್ತಿ ಪ್ರಶಸ್ತಿ ಒಲಿಯಿತು; ಕಾಲ್ಚೆಂಡಾಟ ಮತ್ತು ಬುಟ್ಟಿಚೆಂಡಾಟಗಳಲ್ಲಿ ದ್ವಿತೀಯ ಸ್ಥಾನಗಳು; ಮತ್ತು ಕ್ರೀಡಾ ಹಬ್ಬದಲ್ಲಿ ಕಾಲ್ಚೆಂಡಾಟದಲ್ಲಿ ೧೭ ಮತ್ತು ೧೯ ವರ್ಷದೊಳಗಿನ ಬಾಲಕರ ತಂಡಗಳೆರಡೂ ಚಾಂಪಿಯನ್ ಆಗಿ ಹೊರಹೊಮ್ಮಿದವು.

ಆಗಸ್ಟ್ ೨೦೨೬ರಲ್ಲಿ, ಅಂಕುರ್‌ನ ವಿದ್ಯಾರ್ಥಿಗಳು ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ದಿ ಸಂಹಿತಾ ಅಕಾಡೆಮಿಯನ್ನು ಪ್ರತಿನಿಧಿಸಿದರು. ಅಲ್ಲಿ ಸಾಯಿದತ್ ಕೇವಲ ಶೂನ್ಯ ದಶಮಾಂಶ ಎರಡು ಸೆಕೆಂಡುಗಳ ಅಂತರದಿಂದ ಕಂಚಿನ ಪದಕದಿಂದ ವಂಚಿತರಾದರು. ಇತ್ತೀಚಿನ ಅಥ್ಲೆಟಿಕ್ಸ್ ಕ್ಲಸ್ಟರ್‌ಗಳಲ್ಲಿ ಏಳನೇಯಿಂದ ಹನ್ನೆರಡನೇ ತರಗತಿಯವರೆಗಿನ ಒಟ್ಟು ಹನ್ನೆರಡು ವಿದ್ಯಾರ್ಥಿಗಳ ತಂಡವು ಓಟ, ರಿಲೇ, ಉದ್ದ ಜಿಗಿತ, ಎತ್ತರ ಜಿಗಿತ ಮತ್ತು ಗುಂಡು ಎಸೆತದಲ್ಲಿ ಸ್ಪರ್ಧಿಸಿತು. ಬಾಗಲಕೋಟೆಯ ಡಾ. ಸಿದ್ಧಾಂತ ದಾನಿಗೊಂಡ ಕೇಂದ್ರೀಯ ಶಾಲೆಯಲ್ಲಿ ನಡೆದ ವಾಲಿಬಾಲ್ ಕ್ಲಸ್ಟರ್ ಎಂಟರಲ್ಲಿ ಹದಿನೇಳು ವಿದ್ಯಾರ್ಥಿಗಳು ಭಾಗವಹಿಸಿ ಕಂಚಿನ ಪದಕ ಗಳಿಸಿದರು. ಶ್ರೀ ಕುಮಾರನ್ಸ್ ಶಾಲೆಯಲ್ಲಿ ನಡೆದ ಅಂತರಶಾಲಾ ವಾಲಿಬಾಲ್ ಪಂದ್ಯಾವಳಿಯಲ್ಲಿ ಹದಿನಾಲ್ಕು ವಿದ್ಯಾರ್ಥಿಗಳು ಭಾಗವಹಿಸಿ ಉಪವಿಜೇತರಾದರು, ಅಲ್ಲಿ ಭೂಮಿಕಾ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಪಡೆದರು

ಈ ವರ್ಷ, ಮೂವತ್ತೇಳು ವಿದ್ಯಾರ್ಥಿಗಳು ವ್ಯವಸ್ಥಿತ ಕರಾಟೆ ತರಬೇತಿಯನ್ನು ಪಡೆಯುತ್ತಿದ್ದು, ಹಳದಿ, ಕಿತ್ತಳೆ ಮತ್ತು ಹಸಿರು ಪಟ್ಟಿಗಳ ಹಂತಗಳ ಮೂಲಕ ಸಾಗುತ್ತಾ, ಕಪ್ಪು ಪಟ್ಟಿಯ ಚಾಂಪಿಯನ್ ಆಗುವ ಗುರಿಯನ್ನು ಹೊಂದಿದ್ದಾರೆ.

ಕೆಲವೊಮ್ಮೆ ಫಲಿತಾಂಶಗಳು “ಸೋಲು” ಅಥವಾ “ಭಾಗವಹಿಸುವಿಕೆ” ಎಂದಿದ್ದರೂ, ಅದರ ಹಿಂದಿನ ಮಾದರಿ ಸ್ಪಷ್ಟವಾಗಿದೆ: ಅಂಕುರ್‌ನ ಮಕ್ಕಳು ಒಂದಾದ ಮೇಲೊಂದು ಪಂದ್ಯಾವಳಿಯಲ್ಲಿ, ಹಲವು ಶಾಲೆಗಳ ವಿರುದ್ಧ ತಮ್ಮ ಇರುವಿಕೆಯನ್ನು ತೋರಿಸುತ್ತಿದ್ದಾರೆ, ಮತ್ತು ಕ್ರಮೇಣ ಗೆಲ್ಲುತ್ತಿದ್ದಾರೆ. ಕ್ರೀಡಾ ಕಾರ್ಯಕ್ರಮದ ಬೆಳವಣಿಗೆ ಎಂದಿಗೂ ನೇರ ಗೆರೆಯಂತೆ ಇರುವುದಿಲ್ಲ. ಅದೊಂದು ವಕ್ರರೇಖೆ, ಮತ್ತು ಅಂಕುರ್‌ನ ವಕ್ರರೇಖೆ ನಿಸ್ಸಂದೇಹವಾಗಿ ಏರುತ್ತಿದೆ.